ನಿಮ್ಮ ಅಂಕಣಗಳು..

ಸಂಕ್ರಾಂತಿಯ ಸೊಬಗು



ಜನವರಿಯ ಆಗಮನವಗುತಿದ್ದಂತೆಯೇ ಕರ್ನಾಟಕದ ಮನೆ ಮನೆಗಳಲ್ಲೂ ಮಹಿಳೆಯರ ಚಟುವಟಿಕೆಗಳು
ಎಳ್ಳು,ಬೆಲ್ಲ, ಸಕ್ಕರೆ ಅಚ್ಚು ಗಳ ತಯಾರಿಕೆಯೊಂದಿಗೆ ಪ್ರಾರಂಭವಾಗುತ್ತದೆ.


ಕರ್ನಾಟಕದಲ್ಲಿ "ಸಂಕ್ರಾಂತಿ" ಎಂದು ಪ್ರಚಲಿತದಲ್ಲಿರುವ ಈ ಹಬ್ಬ ಭಾರತದಲ್ಲಿ ವಿವಿಧ
ಹೆಸರುಗಳಿಂದ ಬಳಕೆಯಲ್ಲಿದೆ. ತಮಿಳುನಾಡಿನಲ್ಲಿ "ಪೊಂಗಲ್" ಎಂದಾದರೆ ಅಸ್ಸಾಂನಲ್ಲಿ
"ಬಿಹು" ಎಂದು ಕರೆಯಲ್ಪಡುತ್ತದೆ. ಪಂಜಾಬಿನಲ್ಲಿ "ಲೋಹರಿ" ಎಂದಾದರೆ ಗುಜರಾತಿನಲ್ಲಿ
"ಉತ್ತರಾಯಣ" ಎಂದು ಆಚರಣೆಯಲ್ಲಿದೆ. ಮಹಾರಾಷ್ಟ್ರದಲ್ಲಿ "ಗುಡಿಪರ್ವ" ವಾದರೆ
ಆಂಧ್ರದಲ್ಲಿ "ಸಂಕ್ರಾಂತಿ" ಯಾಗಿ "ಗಾಳಿಪಟದ" ಹಬ್ಬವಾಗಿದೆ.



ಸಾಮಾನ್ಯವಾಗಿ ಜನವರಿ ೧೪ ರಂದು ಬರುವ ಈ ಹಬ್ಬದ ಆಚರಣೆಗಳು ಬೇರೆ ಬೇರೆಯಾದರೂ,
ಮೂಲ ಉದ್ದೇಶ ಮಾತ್ರ ಒಂದೇ. ಸಂಕ್ರಾಂತಿ ಎನ್ನುವುದು ಸಂಸ್ಕೃತ ದಿಂದ
ಬಂದಂತಹ ಪದ. ಸೂರ್ಯನು ತನ್ನ ಪಥದಲ್ಲಿ ಧನುರ್ ರಾಶಿಯಿಂದ
ಮಕರರಾಶಿಗೆ ತಿರುಗುವಾಗ ಆಗುವ ಸಂಕ್ರಾಂತಿಗೆ "ಮಕರ ಸಂಕ್ರಾಂತಿ" ಎಂದು ಕರೆಯುತ್ತಾರೆ.

ಪುರಾಣಗಳಲ್ಲೂ "ಸಂಕ್ರಾಂತಿ" ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇಚ್ಚಾ ಮರಣಿಯಾದ
ಭೀಷ್ಮ ಪಿತಾಮಹ ಶರಶಯ್ಯೆಯಲ್ಲಿ ಮಲಗಿ ಉತ್ತರಾಯಣ ಪುಣ್ಯ ಕಾಲಕ್ಕೆ ಕಾದು ದೇಹತ್ಯಾಗ
ಮಾಡಿದರು. ಭಾಗಿರಥ ಮಹಾರಾಜ, ಸಾಗರನ ೬೦,೦೦೦ ಮಕ್ಕಳಿಗೆ ಮೋಕ್ಷ ಕೊಡಿಸಲು ತಪಸ್ಸು
ಮಾಡಿ ಗಂಗಾಮಾತೆಯನ್ನು ಭೂಮಿಗೆ ತಂದು, ಸಾಗರನ ಮಕ್ಕಳಿಗೆ ಮುಕ್ತಿಯನ್ನು ಸಂಕ್ರಾಂತಿಯ
ದಿನ ಕೊಡಿಸಿದ ಎನ್ನುವ ಕತೆಯು ಪ್ರಚಲಿತದಲ್ಲಿದೆ. ಆದ ಕಾರಣ ಸಂಕ್ರಾಂತಿಯ ದಿನ ಗಂಗಾ
ಸ್ನಾನ ಮಾಡುವುದು ವಾಡಿಕೆಯಲ್ಲಿದೆ.

ಹಳ್ಳಿಗಳಲ್ಲಿ ರೈತರು ಸಂಭ್ರಮದಿಂದ "ಸುಗ್ಗಿಯ ಹಬ್ಬ " ಎಂದು ಆಚರಿಸುತ್ತಾರೆ. ಈ ದಿನ
ರೈತರು ಹಸುಗಳನ್ನು ತೊಳೆದು ಗೋಪೂಜೆ ಮಾಡುತ್ತಾರೆ. ಹೊಸ ಬೆಳೆಯಿಂದ "ಹುಗ್ಗಿ"
ಮಾಡಿ ದೇವರಿಗೆ ಅರ್ಪಣೆ ಮಾಡುತ್ತಾರೆ.

ಪಟ್ಟಣಗಳಲ್ಲಿ ಸಂಜೆಯ ವೇಳೆಯಲ್ಲಿ ಮಹಿಳೆಯರು, ಮಕ್ಕಳು ನೆರೆಹೊರೆಯವರ ಮನೆ ಮನೆಗೆ ಹೋಗಿ
ಎಳ್ಳು, ಬೆಲ್ಲ, ಹುರಿಗಡಲೆ, ಕಡಲೆ ಕಾಯಿ, ಕೊಬ್ಬರಿ ಗಳ ಸವಿ ಮಿಶ್ರಣ , ಸಕ್ಕರೆ ಅಚ್ಚು,
ಕಬ್ಬು - ಬಾಳೆ ಹಣ್ಣು ಗಳನ್ನೂ ಕೊಟ್ಟು ಒಬ್ಬರಿಗೊಬ್ಬರು ಶುಭಾಶಯಗಳನ್ನು ಕೋರುತ್ತಾರೆ.

ಮನೆಗಳಲ್ಲಿ ಪುಟ್ಟ ಮಕ್ಕಳಿದ್ದರೆ, ಅವರನ್ನು ಕೂರಿಸಿ ಎಳ್ಳು ಬೆಲ್ಲದ ಮಿಶ್ರಣ,ಕಬ್ಬಿನ
ಚಿಕ್ಕ ತುಂಡುಗಳು, ಎಲಚಿ ಹಣ್ಣುಗಳನ್ನು ತಲೆಮೇಲಿಂದ ಸುರಿದು ಆರತಿ ಮಾಡಿ ಹರಸುತ್ತಾರೆ.
ಕೆಟ್ಟದ್ದಲ್ಲ ದೂರವಾಗಲಿ ಎನ್ನುವುದು ಇದರ ಉದ್ದೇಶ.

ಈಗಿನ ಯಂತ್ರಿಕ ಜೀವನದಲ್ಲೂ ಜನರು ಅನುಕೂಲಕ್ಕೆ ತಕ್ಕಂತೆ "ರೆಡಿ ಮೇಡ್" ಎಳ್ಳನ್ನು ಅಂಗಡಿಯಿಂದ
ತಂದು ಹಬ್ಬ ಆಚರಣೆ ಮಾಡುತ್ತಾರೆ. ಅವರವರ ಅನುಕೂಲ.

ಬನ್ನಿ. ನಾವೆಲ್ಲರೂ ನಮಗೆ ಅನುಕೂಲವಾದ ರೀತಿಯಲ್ಲಿ "ಸಂಕ್ರಾಂತಿ" ಯನ್ನು ಆಚರಿಸೋಣ.
ಎಳ್ಳು ಬೆಲ್ಲವನ್ನು ಸವಿದು ಒಳ್ಳೆಯದನ್ನು ಮಾತನಾಡೋಣ.


---ಶ್ರೀಗೀತಾ ಕಾರಂತ